ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ

Spread the love

ದಾವಣಗೆರೆ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹರಿಹರ. ದಿನಾಂಕ : ೧೮ ಮತ್ತು ೧೯ ಮಾರ್ಚ್ ೨೦೨೪
ವಿಶೇಷ ಉಪನ್ಯಾಸ : ಹೆಚ್.ಮಲ್ಲಿಕಾರ್ಜುನ, ಪ್ರಾಚಾರ್ಯರು, ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜು, ಹರಪನಹಳ್ಳಿ, ವಿಜಯನಗರ ಜಿಲ್ಲೆ. ೯೪೪೮೧೮೮೨೮೧
ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ
ಖಾಸಗೀಕರಣದ ನೆಪದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ನಲುಗುತ್ತಿದ್ದು, ಪಾಲಕ ಪೋಷಕರು ಆಂಗ್ಲ ಭಾಷೆಯ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕನ್ನಡ ಶಾಲೆಗಳು ಕೆಲವೆಡೆ ಮುಚ್ಚುವ ಹಂತಕ್ಕೆ ಬಂದಿವೆ. ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸಿ ಶಿಕ್ಷಕರ ಮರು ಹೊಂದಾಣಿಕೆ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಶಾಲೆಗಳಲ್ಲಿ ೨೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವಂತಹ ೧೪೭೮೩ ಶಾಲೆಗಳನ್ನು ಮುಚ್ಚಲು ಈ ಹಿಂದೆ ಸರ್ಕಾರ ನಿರ್ಧಾರ ಕೈಗೊಂಡಿರುವುದು ಶೋಚನೀಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಒಬ್ಬ ಖಾಯಂ ಶಿಕ್ಷಕನಿಲ್ಲದೆ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದು, ಬೋಧನೆ ಮತ್ತು ಆಡಳಿತಾತ್ಮಕ ಕೊರತೆಯಿಂದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಕನ್ನಡ ಶಾಲೆಗಳ ಸಬಲೀಕರಣದ ಉದ್ದೇಶದಿಂದ ‘ನಮ್ಮೂರ ಶಾಲೆ’ ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಪ್ರಯುಕ್ತ ಎಲ್ಲಾ ಕನ್ನಡ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಶಾಲಾ ಅಭಿವೃದ್ದಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ.
ಕನ್ನಡ ಶಾಲೆಗಳ ಸ್ಥಿತಿ-ಗತಿ :
ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಗೆ ಉತ್ತಮ ಪರಿಕಲ್ಪನೆಯಾಗಿದೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ೧೦ ಲಕ್ಷ ವೈಯಕ್ತಿಕ ನೆರವು ನೀಡುವ ಮೂಲಕ ಸದರಿ ಯೋಜನೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ೨೦,೪೪೦ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ೨೧,೭೯೯ ಹಿರಿಯ ಪ್ರಾಥಮಿಕ ಶಾಲೆಗಳು ಇದ್ದು, ಈ ಪೈಕಿ ೨೯,೯೦೪ ಕಟ್ಟಡಗಳು ಶಿಥಿಲಗೊಂಡಿವೆ ೧೪,೪೭೨ ಸರ್ಕಾರಿ ಶಾಲೆಗಳು ಸಣ್ಣ ಪ್ರಮಾಣದ ದುರಸ್ತಿ ಹಾಗೂ ೧೫,೪೩೨ ಶಾಲೆಗಳು ದೊಡ್ಡ ಪ್ರಮಾಣದ ದುರಸ್ತಿ ಕಾರ್ಯ ನಡೆಯಬೇಕಿದೆ. ಶಿಥಿಲಗೊಂಡ ಕಟ್ಟಡ, ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ೧೯,೨೬೯ ಸರ್ಕಾರಿ ಪ್ರಾಥಮಿಕ ಹಾಗೂ ೭೦೦ ಪ್ರೌಢ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಹಲವು ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿಯನ್ನು ಕೈಗೊಂಡಿರುವುದಿಲ್ಲ. ಅನೇಕ ಕನ್ನಡ ಶಾಲೆಗಳಲ್ಲಿ ೧೫೦-೨೦೦ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದು, ಶಿಕ್ಷಕರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಲ್ಕಂಡ ದತ್ತಾಂಶವನ್ನು ಇತ್ತೀಚಿನ ಎಜುಕೇಷನ್ ಪ್ಲಸ್ ಗಾಗಿ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಂ (ಯುಡಿಐಎಸ್ಎ+) ೨೦೨೧-೨೨ರ ಒಂದು ವರದಿ ಬಹಿರಂಗಪಡಿಸಿದ್ದು, ಈ ಮೂಲಕ ಕರ್ನಾಟಕದ ಶಾಲೆಗಳಲ್ಲಿರುವ ಕಳಪೆ ಮೂಲಸೌಕರ್ಯ ಹಾಗೂ ಕೊರತೆಯ ಮೇಲೆ ಬೆಳಕು ಚೆಲ್ಲಿದೆ. ವರದಿಯ ಪ್ರಕಾರ ೭೧೪ ಶಾಲೆಗಳಲ್ಲಿ ವಿದ್ಯುತ್ ಇಲ್ಲ ಹಾಗೂ ೨೨೦ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ೮,೧೫೩ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯಗಳಿಲ್ಲವಂತೆ. ಅಂದಾಜು ೨೨,೬೧೬ ಶಾಲೆಗಳಲ್ಲಿ ವಿಶೇಷ ಅಗತ್ಯಗಳಿರುವಂತಹ ಮಕ್ಕಳಿಗಾಗಿ ರ್ಯಾಂ ಪ್ಗಳಿಲ್ಲ ಮತ್ತು ಅಗತ್ಯ ಬೋಧನಾ ಸಲಕರಣೆಗಳಿರುವುದಿಲ್ಲ ಆದುದರಿಂದ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ವಿಶೇಷಚೇತನ ಮಕ್ಕಳು ಶಾಲೆಗೆ ಹೋಗದಿರುವುದು ಕಲಿಕೆಗೆ ಹಿನ್ನಡೆ ಉಂಟಾಗಿದೆ. ಸುಮಾರು ೧೨,೪೪೨ ಶಾಲೆಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ತಪಾಸಣೆಗಳನ್ನು ನಡೆಸಿಲ್ಲ. ಈ ವರದಿಯನ್ನು ಸಾರ್ವಜನಿಕಗೊಳಿಸಿದಾಗಿನಿಂದ, ರಾಜ್ಯದಲ್ಲಿರುವ ಶಿಕ್ಷಣದ ಸ್ಥಿತಿಗತಿಯ ಕುರಿತು ಅನೇಕ ತಜ್ಞರು ಹಾಗೂ ಕಾರ್ಯಕರ್ತರು ಕಾಳಜಿಗಳನ್ನು ವ್ಯಕ್ತಪಡಿಸಿದ್ದಾರೆ.
ಮೂಲ ಸೌಭ್ಯಗಳ ಕೊರತೆ :
ಅನೇಕ ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆದ ಶಿಕ್ಷಕರ ಕೊರತೆ, ಸರಿಯಾದ ತರಗತಿ ಕೊಠಡಿಗಳು ಇಲ್ಲದಿರುವುದು, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಗ್ರಂಥಾಲಯಗಳು ಮತ್ತು ಆಟದ ಮೈದಾನಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇದು ವಿದ್ಯಾರ್ಥಿಗಳಿಗೆ ಒದಗಿಸುವ ಶಿಕ್ಷಣದ ಒಟ್ಟಾರೆ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಗಣನೀಯ ಸಂಖ್ಯೆಯ ಸರ್ಕಾರಿ ಶಾಲೆಗಳಲ್ಲಿ ಸುಶಿಕ್ಷಿತ ಮತ್ತು ಅರ್ಹ
ಶಿಕ್ಷಕರಿಲ್ಲ. ಇದರಿಂದ ಕಳಪೆ ಗುಣಮಟ್ಟದ ಬೋಧನೆ ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿಯ ಕೊರತೆ ಉಂಟಾಗುತ್ತದೆ. ಆಧುನಿಕ ಬೋಧನ ಉಪಕರಣಗಳ ಕೊರತೆ ಎದ್ದು ಕಾಣುತ್ತಿದೆ. ಸಮವಸ್ತç, ಪೌಷ್ಟಿಕ ಆಹಾರ, ಶೌಚಾಲಯ, ಕಲಿಕಾ ಸಾಮಗ್ರಿ, ಇ-ಕಲಿಕಾ ಕೇಂದ್ರ, ವಾಚನಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆರೋಗ್ಯ ತಪಾಸಣೆ ಇಲ್ಲದೆ ಕನ್ನಡ ಶಾಲೆಗಳಿಗೆ ಪರದೇಶಿ ಸ್ಥಿತಿ ಉಂಟಾಗಿದೆ. ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ, ಕಾಂಪೌAಡ್ ಗೋಡೆಗಳೂ ಇಲ್ಲ! ಇವು ರಾಜ್ಯದ ಹಲವು ಸರ್ಕಾರಿ ಶಾಲೆಗಳ ಸ್ಥಿತಿ. ಬಡವರ ಮಕ್ಕಳು ಶಿಕ್ಷಣ ಕಲಿಯುವ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಅಯೋಮಯವಾಗಿವೆ. ಹೀಗೆ ಸಾಕಷ್ಟು ಸಮಸ್ಯೆಗಳು ಸರ್ಕಾರಿ ಶಾಲೆಗಳು ಎದುರಿಸುತ್ತಿದ್ದರು ಸಹ ರಾಜ್ಯ ಸರ್ಕಾರ ಪರಿಹರಿಸುವ ಬದಲು ಅನಾವಶ್ಯಕ ಆದೇಶಗಳನ್ನು ಮಾಡುವ ಮೂಲಕ ಕನ್ನಡ ಶಾಲೆಗಳ ಹಿನ್ನಡೆಗೆ ಕಾರಣವಾಗಿದೆ.

ಬೋಧನೆ ಕಾರ್ಯವೇ ಕಡಿಮೆ :
ಶಿಕ್ಷಕರಿಗೆ ಬೋಧನಾ ಕಾರ್ಯಕ್ಕಿಂತ ಜನಗಣತಿ, ಜಾತಿ ಗಣತಿ, ಜಾನುವಾರು ಗಣತಿ, ಚುನಾವಣಾ ಕಾರ್ಯ, ಬಿಸಿ ಊಟ ನಿರ್ವಹಣೆ, ಹಾಲು-ಹಣ್ಣು, ಸಮವಸ್ತç, ಪಠ್ಯ-ಪುಸ್ತಕ ಇತ್ಯಾದಿ ವಿತರಣಾ ಜವಾಬ್ದಾರಿ ವಹಿಸಿರುವುದರಿಂದ ಬೋಧನೆಗೆ ಸಮಯವಿಲ್ಲದಂತಾಗಿದೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ.

ಪರೀಕ್ಷೆ ಮತ್ತು ಮೌಲ್ಯಮಾಪನ ಪದ್ದತಿ :
ಇತ್ತೀಚಿನ ಪರೀಕ್ಷಾ ಮತ್ತು ಮೌಲ್ಯಮಾಪನ ಪದ್ದತಿಯಲ್ಲಿ ವಿಭಿನ್ನವಾದ ನಿಯಾಮವಳಿಗಳು ಜಾರಿಗೆ ಬಂದಿರುವ ಪ್ರಯುಕ್ತ ಮಕ್ಕಳ ಕಲಿಕೆ ಶಿಕ್ಷಕರ ಬೋಧನೆ ಇತ್ಯಾದಿ ಗೊಂದಲದಿAದಾಗಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಲ್ಲಿ ಹಿಂಜರಿಯುತ್ತಿದ್ದಾರೆ.
ಗಡಿ ಭಾಗದ ಭಾಷಾ ಸಮಸ್ಯೆ :
ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳು ಇತರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಆಂಗ್ಲ, ಮರಾಠಿ, ತೆಲುಗು, ತಮಿಳು ಮಾಧ್ಯಮದ ಶಾಲೆಗಳಾಗಿ ಪರಿವರ್ತನೆಗೊಳ್ಳುತ್ತಿರುವುದನ್ನು ಅರಿತು ಸರ್ಕಾರವು ದಿಟ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದು ವಿಪರ್ಯಾಸವಾಗಿದೆ.
ಪಠ್ಯಕ್ರಮ :
ಅನೇಕ ಸರ್ಕಾರಿ ಶಾಲೆಗಳು ಅನುಸರಿಸುತ್ತಿರುವ ಪಠ್ಯಕ್ರಮವು ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಅಗತ್ಯವಿರುವ ಸಂಬAಧಿತ ಕೌಶಲ್ಯಗಳನ್ನು ಒದಗಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಕೊರತೆ ಉಂಟಾಗುತ್ತಿದೆ ಮತ್ತು ಬದಲಾದ ಸರ್ಕಾರಗಳು ತಮಗಿಷ್ಟಬಂದAತೆ ಪಠ್ಯಕ್ರಮವನ್ನು ಬದಲಾಯಿಸಿ ಮಕ್ಕಳ ಕಲಿಕಾಸಕ್ತಿಯಲ್ಲಿ ಗೊಂದಲವಾಗಿರುವುದು.

ಅಸಮರ್ಪಕ ಅನುದಾನ :
ಅನೇಕ ಸರ್ಕಾರಿ ಶಾಲೆಗಳು ಅಸಮರ್ಪಕ ನಿಧಿಯಿಂದ ಬಳಲುತ್ತಿವೆ, ಇದು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮತ್ತು ಉತ್ತಮ ಅರ್ಹ ಶಿಕ್ಷಕರನ್ನು ಆಕರ್ಷಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೊಣೆಗಾರಿಕೆಯ ಕೊರತೆ :
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಲ್ಲಿ ಹೊಣೆಗಾರಿಕೆ ಹೆಚ್ಚಾಗಿದ್ದು ಇದರಿಂದ ಕಳಪೆ ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳಲ್ಲಿ ಪ್ರೇರಣೆಯ ಕೊರತೆಗೆ ಕಾರಣವಾಗುತ್ತದೆ.

ಕಳಪೆ ಶಿಕ್ಷಕ-ವಿದ್ಯಾರ್ಥಿ ಅನುಪಾತ :
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತವು ಸಾಮಾನ್ಯವಾಗಿ ಪ್ರಾಥಮಿಕ ಶಾಲೆ ೧:೪೦ ಇದ್ದು, ಪ್ರೌಢಶಾಲೆಯಲ್ಲಿ ೧:೭೦ ಅನುಪಾತದಿಂದ ವಿದ್ಯಾರ್ಥಿಗಳ ವೈಯಕ್ತಿಕ ಗಮನಹರಿಸಲು ಸಾಧ್ಯವಾಗುತ್ತಿಲ್ಲ.

ಶಾಲೆಯಿಂದ ಹೊರಗುಳಿದ ಮಕ್ಕಳು :
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪೋಷಕರು ತಮ್ಮ ಮಕ್ಕಳನ್ನು ದುಡಿಮೆಗಾಗಿ ಕೂಲಿ ಕೆಲಸಕ್ಕೆ ಮತ್ತು ಇತ್ಯಾದಿ ಕಾರಣಗಳಿಂದ ಮಕ್ಕಳನ್ನು ಶಾಲೆಗೆ ಕಳಿಸದಿರುವುದು ಕಂಡುಬAದಿರುವುದು.

ಮುಚ್ಚಿದ ಕನ್ನಡ ಶಾಲೆ :
ನಾನು ಅಪ್ಪಟ ಕನ್ನಡ ಅಭಿಮಾನಿಯಾಗಿದ್ದು ಹರಪನಹಳ್ಳಿ ಪಟ್ಟಣದಲ್ಲಿ ೧೯೯೯ರಲ್ಲಿ ಕನ್ನಡ ಶಾಲೆ ತೆರೆದು ೧೫ ವರ್ಷಗಳ ಕಾಲ ಸುಗಮವಾಗಿ ಮುನ್ನಡೆಸಿ, ಪಾಲಕ ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದಾಗಿ ವಿದ್ಯಾರ್ಥಿಗಳಿಲ್ಲದೆ ಕನ್ನಡ ಶಾಲೆಯನ್ನು ಮುಚ್ಚಬೇಕಾಯಿತು.

ಕನ್ನಡ ಶಾಲೆಗಳ ಅಭಿವೃದ್ಧಿಗೆ ೨೦ ಅಂಶಗಳು :
೧. ಹಳೆಯ ವಿದ್ಯಾರ್ಥಿಗಳ, ದಾನಿಗಳ ಹಾಗೂ ಸಮುದಾಯದ ನೆರವು ಪಡೆದು ಕನ್ನಡ ಶಾಲೆ ಅಭಿವೃದ್ಧಿಪಡಿಸಬೇಕು.
೨. ಸರ್ಕಾರಿ ಶಾಲೆಗಳಿಗೆ ಬರುವುದು ಬಹುತೇಕ ಬಡವರ ಮಕ್ಕಳು. ಈ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒತ್ತು ಕೊಡಬೇಕು.
೩. ಅನೇಕ ಶಾಲೆಗಳು ಸೋರುತ್ತಿದ್ದು, ಸೋರುವ ಶಾಲೆಗಳನ್ನು ಗಟ್ಟಿಗೊಳಿಸಿ ಕನ್ನಡ ಉಳಿಸಿ ಬೆಳೆಸಬೇಕು.
೪. ಮಾಧ್ಯಮ ಮುಖ್ಯವಲ್ಲ, ಕಲಿಯುವ ಆಸಕ್ತಿ ಮುಖ್ಯ ಎಂಬುದನ್ನು ಮಕ್ಕಳಿಗೆ ಮೂಡಿಸುವುದು.
೫. ಭಾಷೆಯನ್ನು ಕಲಿಸುವ ವ್ಯವಸ್ಥೆ ಮತ್ತು ಕಲಿಸುವ ವಿಧಾನದ ಬಗ್ಗೆ ಆದ್ಯತೆಯನ್ನು ನೀಡುವುದು.
೬. ಕನ್ನಡ ಉಳಿಸಿ ಬೆಳೆಸುವುದೆಂದರೆ ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವುದು ಎಂಬುದನ್ನು ಒಡಮೂಡಿಸುವುದು.
೭. ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಮತ್ತು ಕಲಿಕೆಗೆ ಪೂರಕ ಯೋಜನೆಗಳನ್ನು ರೂಪಿಸುವುದು.
೮. ೬೨೧೪೫ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಸಕಾಲಕ್ಕೆ ತುಂಬುವುದು.
೯. ಕಂಪ್ಯೂಟರ್, ವೃತ್ತಿಪರ ಶಿಕ್ಷಣ ಹಾಗು ಸ್ಮಾರ್ಟ್ ಕ್ಲಾಸ್ ಪ್ರಾಥಮಿಕ ಹಂತದಿAದಲೇ ಜಾರಿಗೆ ತರುವುದು.
೧೦. ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ದಾಖಲಿಸುವಂತೆ ಕಾನೂನು ಜಾರಿಗೆ ತರುವುದು.
೧೧. ಕಾಲ ಕಾಲಕ್ಕೆ ಪಠ್ಯಕ್ರಮಕ್ಕನುಗುಣವಾಗಿ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಬೋಧನಾ ನೈಪುಣ್ಯತೆ ಮೂಡಿಸುವುದು.
೧೨. ವ್ಯಕ್ತಿತ್ವ ವಿಕಸನ, ಯೋಗ, ಮಾನವೀಯ ಮೌಲ್ಯಗಳ ಶಿಕ್ಷಣ ಇತ್ಯಾದಿ ತರಬೇತಿ ನೀಡುವುದು.
೧೩. ವಿಶೇಷ ಚೇತನ ಮಕ್ಕಳ ಕಲಿಕೆಗಾಗಿ ಬೋಧನಾ ಸಲಕರಣೆಗಳನ್ನು ಹಾಗೂ ಸೌಲಭ್ಯಗಳನ್ನು ಒದಗಿಸುವುದು.
೧೪. ಎಲ್ಲಾ ಮೂಲ ಸೌಕರ್ಯಗಳಿಗಾಗಿ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುವುದು.
೧೫. ವಿಷಯವಾರು ಶಿಕ್ಷಕರ ನೇಮಕ ಮತ್ತು ತರಗತಿಗೊಬ್ಬ ಶಿಕ್ಷಕರ ನೇಮಕ ಮಾಡುವುದು.
೧೬. ಪ್ರತಿ ಪ್ರಾಥಮಿಕ ಶಾಲೆಗೊಬ್ಬ ಗುಮಾಸ್ತರ ನೇಮಕ ಮಾಡುವುದು.
೧೭. ಪ್ರತಿ ಶಾಲೆಯಲ್ಲಿ ಇ-ಕಲಿಕಾ ಕೇಂದ್ರ, ವಾಚನಾಲಯ ವ್ಯವಸ್ಥೆ ಕಲ್ಪಿಸುವುದು.
೧೮. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ ಕಲ್ಪಿಸುವುದು.
೧೯. ಶಿಕ್ಷಕರನ್ನು ಅನ್ಯ ಇಲಾಖೆಗೆ ನಿಯೋಜನೆಗೊಂಡಿರುವುದನ್ನು ರದ್ದುಗೊಳಿಸಬೇಕು.
೨೦. ೧ ರಿಂದ ೧೦ನೇ ತರಗತಿವರೆಗೆ ಕನ್ನಡವನ್ನು ಕಡ್ಡಾಯಗೊಳಿಸಬೇಕು.

Leave a Reply

Your email address will not be published. Required fields are marked *

Back To Top