ಗುರು ಪರಂಪರೆ ಮತ್ತು ಗುರು ಶಿಷ್ಯರ ಬಾಂಧವ್ಯ
‘ಹರ ಮುನಿದರೂ ಗುರು ಕಾಯ್ವನು’ ಎನ್ನುವ ನಾಣ್ಣುಡಿ ಸತ್ಯವಾಗಿದೆ, ಋಷಿ ಮುನಿಗಳು ಆಶ್ರಮಗಳಲ್ಲಿ ನೆಲೆಸಿ ಗುರುಕುಲಗಳನ್ನು ನಡೆಸುತ್ತಾ ವಿದ್ಯಾ ದಾನ ಮಾಡುತ್ತಿದ್ದರು. ಇಂದು ಗುರುಕುಲಗಳು ಮಾಯವಾಗಿ ಶಾಲಾ ಕಾಲೇಜುಗಳಾಗಿ, ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಎಲ್ಲಾ ಧರ್ಮಗಳಲ್ಲಿಯೂ ಗುರು ಶಿಷ್ಯರ ಆಧ್ಯಾತ್ಮಿಕ ಸಂಬAಧ, ಮಾರ್ಗದರ್ಶನ, ಸಂಪ್ರದಾಯ ಮತ್ತು ಬೋಧನೆಗಳು ಗುರುವಿನಿಂದ ಶಿಷ್ಯನಿಗೆ ನೀಡಲಾಗುತ್ತದೆ. ಕೆಲವೊಂದು ವಿಶಿಷ್ಟ ತಂತ್ರಗಳಿAದ ವಿದ್ಯಾರ್ಥಿಯ ಯೋಗ್ಯತೆಯನ್ನು ಚನ್ನಾಗಿ ಪರೀಕ್ಷಿಸಿ ಬೋಧಿಸುತ್ತಿದ್ದರು. ಗುರುವಿಗೆ ಇಷ್ಟೇ ಬೋಧನಾ ಶುಲ್ಕ ಕೊಡಬೇಕೆಂಬ ನಿಯಮವೂ ಇರಲಿಲ್ಲ ನಿರೀಕ್ಷೆಯೂ ಇರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಗುರು ಶಿಷ್ಯರ ಬಾಂಧವ್ಯ ನೇರವಾಗಿ ವಿದ್ಯಾರ್ಥಿ ದೆಸೆಯಲ್ಲಿ ಶಿಷ್ಯನಿಗೆ ದೊರಕುವ ಬಹುಮಾನ, ದಾನ ಇವುಗಳೆಲ್ಲ ಗುರುಗಳಿಗೆ ಸಲ್ಲಬೇಕೆಂಬ ನ್ಯಾಯವಿತ್ತು.
ಗುರು ಶಿಷ್ಯರ ಬಾಂಧವ್ಯ ಜಗತ್ತಿನಲ್ಲೇ ಶ್ರೇಷ್ಠವಾಗಿದೆ. ಇಲ್ಲಿ ಶ್ರದ್ಧೆ ಮತ್ತು ಪ್ರೇಮಗಳು ಬಹಳ ದೊಡ್ಡ ಕೆಲಸ ನಿರ್ವಹಿಸುತ್ತವೆ. ನಮ್ಮಲ್ಲಿರುವ ಅಂಧಕಾರವನ್ನು ದೂರ ಮಾಡುವವನೆ ಗುರು. ಕೆಲವರಿಗೆ ಹಣ ಅಧಿಕಾರ ಇರುವವರೆಗೆ ಮಾತ್ರ ಗೌರವ, ಆದರೆ ಗುರುವಿಗೆ ಯಾವತ್ತಿಗೂ ಶಾಶ್ವತವಾದ ಗೌರವವನ್ನು ಶಿಷ್ಯರಿಂದ ಕಾಣಬಹುದು. ಗೊತ್ತಿಲ್ಲದಿರುವುದನ್ನು ತಿಳಿದುಕೊಳ್ಳಲು ಸತ್ಯ, ನ್ಯಾಯ, ನೀತಿ ಮಾರ್ಗದಲ್ಲಿ ನಡೆಯಲು ಗುರು ಬೇಕು. ಕಾಣದಿರುವುದನ್ನು ತೋರಿಸುವವನೆ ಗುರು. ಬದುಕಿನಲ್ಲಿ ಬೆಳಕು ಹರಡಲು ಗುರುವಿರಬೇಕು ಆಂತರಿಕ ಮತ್ತು ಬಾಹ್ಯದಲ್ಲಿ ಉತ್ತಮ ನಡವಳಿಕೆಗಳಿಂದ ಆದರ್ಶನಾದ ಗುರು ಆದರ್ಶ ವಿದ್ಯಾರ್ಥಿಯನ್ನು ನಿರ್ಮಿಸಬಲ್ಲ. ವಿದ್ಯಾರ್ಥಿಗಳನ್ನು ಒಳ್ಳೆಯ ಮಾತಿನಿಂದ ಸನ್ಮಾರ್ಗಕ್ಕೆ ತಂದು ಉತ್ತಮ ನಡತೆಯನ್ನು ಕಲಿಸುತ್ತಾನೆ. ಶಿಷ್ಯರನ್ನು ತನ್ನ ಮಕ್ಕಳಂತೆಯೇ ಕಾಣುತ್ತಾನೆ. ಗುರುಗಳು ಕೇವಲ ಪಠ್ಯ ವಿಷಯ ಜ್ಞಾನವನ್ನು ನೀಡದೆ ಆಹಾರ, ನಿದ್ರೆ, ಆರೋಗ್ಯ, ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಸ್ಪಷ್ಟ ತಿಳುವಳಿಕೆಯನ್ನು ಪ್ರಾಪಂಚಿಕ ಜ್ಞಾನವನ್ನು ನೀಡುತ್ತಾನೆ. ಗುರು ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ವಿಶ್ವಾಸ, ಸಹನೆ, ದಯೆ, ಕ್ಷಮೆ, ಸಹಕಾರ, ಸಹಾಯ, ಒಳ್ಳೆಯದರ ಬಗ್ಗೆ ಮೆಚ್ಚುಗೆ, ನಾಯಕತ್ವ ಗುಣಗಳನ್ನು ಕಲಿಸುತ್ತಾರೆ. ಗುರು ಸ್ನೇಹಿತನಂತಿದ್ದು ವಿದ್ಯಾರ್ಥಿಗಳ ಉತ್ಸಾಹವನ್ನು ಎಂದೂ ಕುಗ್ಗಿಸುವುದಿಲ್ಲ. ವಿದ್ಯಾರ್ಥಿಯ ಬೆಳವಣಿಗೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತಾನೆ. ಸಮಸ್ಯೆಗಳಿಂದ ಹೊರ ಬರುವ ದಾರಿ, ಧೈರ್ಯ, ಸ್ಥೆರ್ಯ, ಆತ್ಮವಿಶ್ವಾಸವನ್ನು ತುಂಬುತ್ತಾನೆ. ಗುರು ವ್ಯವಹಾರ ಚತುರನು, ವಿವೇಕಿಯು, ಕುಶಾಗ್ರಮತಿಯೂ ಇತಿಹಾಸ ನಿರ್ಮಿಸುವವನಾಗಿರುತ್ತಾನೆ.
‘ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಈ ಸಾಲು ನಮ್ಮ ಸಂಸ್ಸೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ತಮ್ಮ ಜೀವಿತಾವಧಿಯವರೆಗೂ ಗುರುವನ್ನು ಮರೆಯಬಾರದು. ಗುರು ಕಾಣಿಕೆಯಂದರೆ ಗುರು ಸ್ಮರಣೆಗಿಂತ ಮಿಗಿಲಾದ ಕಾಣಿಕೆಯಿಲ್ಲ. ಎಂತಹ ಸೈನ್ಯ ಶಕ್ತಿಯ ಮುಂದೆ ಮಣಿಯದವನೂ ತನ್ನ ಪರಮ ಗುರುವಿನ ಮುಂದೆ ತಲೆ ಬಾಗದೆ ಇರಲಾರ. ಗುರುವಿನ ಮಾರ್ಗದರ್ಶನಕ್ಕೆ ಶ್ರದ್ಧೆ ಇರಬೇಕು ಶ್ರದ್ಧೆ ಇಲ್ಲದಿದ್ದರೆ ಏನನ್ನೂ ಕಲಿಯಲು ಸಾಧ್ಯವಿಲ್ಲ.
ಅನೇಕ ಶಿಷ್ಯ ಬಳಗ ಕಲಿಸಿದ ಗುರುಗಳಿಗೆ ಗುರು ನಮನ, ಗುರುವಂದನೆ ಎಂದು ಗುರುಗಳಿಗೆ ನಮಸ್ಕರಿಸಿ ಗೌರವಿಸುವ ಸ್ಮರಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ಶಿಷ್ಯರು ಎಷ್ಟೇ ಎತ್ತರಕ್ಕೆ ಬೆಳೆದರೂ ಅದನ್ನು ನೋಡಿ ಹೆಮ್ಮೆ ಪಟ್ಟುಕೊಂಡು ಸಂತೋಷಪಡುವವನು ಗುರು. ಆದರೆ ಹಣ, ಅಧಿಕಾರದ ದರ್ಪದಿಂದ ವರ್ತಿಸುವವರೂ, ಗುರುಗಳು ಕಂಡರೂ ಅಪರಿಚಿತರಂತೆ ಕಂಡೂ ಕಾಣದಂತೆ ಹೋಗುವವರೂ ಇದ್ದಾರೆ. ಶಿಷ್ಯರು ತಮ್ಮ ಗುರುಗಳ ಬಗ್ಗೆ ಕಾಯ, ವಾಚಾ, ಮನಸಾ ಗೌರವದಿಂದ ನಡೆದುಕೊಳ್ಳಬೇಕು. ವಿಧೇಯ ವಿದ್ಯಾರ್ಥಿಯಾಗಿದ್ದರೆ ಬದುಕು ಸುಂದರ ಮತ್ತು ಸುಖಮಯವಾಗುತ್ತದೆ.
ಇಂದಿನ ಶಿಕ್ಷಣ ಶಿಕ್ಷೆಯಾಗಿ ಇಷ್ಟವಿಲ್ಲದ ವಿಷಯಗಳನ್ನು ತಲೆಗೆ ತುರುಕುವ ಕೆಲಸವಾಗುತ್ತಿದೆ. ಶಾಲೆಗಳಲ್ಲಿ ನೀಡುವ ಶಿಕ್ಷೆಯ ಪ್ರಮಾಣಗಳು ಕಡಿಮೆಯಾಗಿ ಅಪರಾಧ ಪ್ರಕರಣಗಳು ಯುವಕರಲ್ಲಿ ಹೆಚ್ಚಾಗುತ್ತಿವೆ. ವಿದ್ಯೆ ಕದಿಯಲಾರದ ಸಂಪತ್ತಾಗಿದ್ದು, ಮಕ್ಕಳೇ ನಮ್ಮ ಆಸ್ತಿಯಾದರೆ ಆ ಆಸ್ತಿಯನ್ನು ಮೌಲ್ಯಯುತಗೊಳಿಸುವವರು ಗುರುಗಳು. ದ್ರೋಣಾಚಾರ್ಯ-ಅರ್ಜುನ, ಚಾಣಕ್ಯ-ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿವಿವೇಕಾನAದ ಮುಂತಾದ ಗುರು ಶಿಷ್ಯರ ಉತ್ತಮ ಪರಂಪರೆಯನ್ನು ಕಾಣುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಗುರು ಶಿಷ್ಯರನ್ನು ಅಸಭ್ಯವಾಗಿ ಬಪೂನರಂತೆ ತೋರಿಸುತ್ತಿದ್ದು ಇವು ಗುರು-ಶಿಷ್ಯರ ಅಂತರವನ್ನು ಹೆಚ್ಚಿಸುತ್ತಿವೆ. ಇಂದು ನೈತಿಕ ಶಿಕ್ಷಣದ ಅವಶ್ಯಕತೆಯಿದೆ, ಗುರುವಿನ ಪ್ರಾಮಾಣಿಕತೆ, ಶಿಸ್ತು, ಬದ್ಧತೆ, ಜ್ಙಾನ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಂಡರೆ ಉತ್ತಮ ಗುರು ಶಿಷ್ಯ ಬಾಂಧವ್ಯದಿAದ ಶಿಷ್ಯನ ಯಶಸ್ಸಿಗೆ ಕಾರಣವಾಗಬಲ್ಲದು.
“ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ;
ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.”
ಹೆಚ್.ಮಲ್ಲಿಕಾರ್ಜುನ ಹರಪನಹಳ್ಳಿ